ದೀಪಾವಳಿ ಹಬ್ಬದ ಹೊಸ್ತಿಲಲ್ಲೇ ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ.
ದೀಪಾವಳಿ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹಾಲಿನ ದರ ಏರಿಕೆಯ ಬೆನ್ನಲ್ಲೇ ಇದೀಗ ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗಿದ್ದು, ಹಬ್ಬದ ಖರೀದಿಗೆ ಹೊರಟಿರುವ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜ್ಯದಲ್ಲಿ ಮಳೆಯ ಕೊರತೆ ಹಾಗೂ ಬೆಳೆ ನಷ್ಟದ ಪರಿಣಾಮ ಮಾರುಕಟ್ಟೆಗೆ ತರಕಾರಿ ಪೂರೈಕೆ ಕಡಿಮೆಯಾಗಿದೆ ಎಂಬುದು ವ್ಯಾಪಾರಿಗಳ ಅಭಿಪ್ರಾಯ. ಹೀಗಾಗಿ ದಿನಬಳಕೆಯ ತರಕಾರಿಗಳ ಬೆಲೆ ಏರಿಕೆಯಾಗಿದೆ. ಈರುಳ್ಳಿ ದರ ಶತಕದತ್ತ ಸಾಗುತ್ತಿದ್ದರೆ, ಸೊಪ್ಪುಗಳ ಬೆಲೆಯೂ ಗಣನೀಯವಾಗಿ ಹೆಚ್ಚಾಗಿದೆ.
ಹಾಪ್ಕಾಮ್ಸ್ ದರಪಟ್ಟಿಯ ಪ್ರಕಾರ, ದಪ್ಪ ಈರುಳ್ಳಿ ಕೆಜಿಗೆ 77 ರೂಪಾಯಿ, ಸಾಂಬಾರ್ ಈರುಳ್ಳಿ 140 ರೂಪಾಯಿ, ಹುರುಳಿಕಾಯಿ 90 ರೂಪಾಯಿ, ಡಬ್ಬಲ್ ಬೀನ್ಸ್ 110 ರೂಪಾಯಿ ಹಾಗೂ ನುಗ್ಗೆಕಾಯಿ 140 ರೂಪಾಯಿಗೆ ಮಾರಾಟವಾಗುತ್ತಿದೆ.
ಇನ್ನು ಬೆಳ್ಳುಳ್ಳಿ ಕೆಜಿಗೆ 310 ರೂಪಾಯಿ, ಆಲೂಗಡ್ಡೆ 65 ರೂಪಾಯಿ, ಕ್ಯಾರೆಟ್ 50 ರೂಪಾಯಿ ಮತ್ತು ಹಸಿಮೆಣಸಿನಕಾಯಿ 90 ರೂಪಾಯಿ ದರವಿದೆ.
ಸೊಪ್ಪುಗಳ ಬೆಲೆಯೂ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಕೊತ್ತಂಬರಿ ಸೊಪ್ಪು ಕೆಜಿಗೆ 180 ರೂಪಾಯಿ, ಸಬ್ಬಕ್ಕಿ ಸೊಪ್ಪು 160 ರೂಪಾಯಿ, ಪುದೀನಾ 102 ರೂಪಾಯಿ ಹಾಗೂ ಪಾಲಕ್ ಸೊಪ್ಪು 90 ರೂಪಾಯಿಗೆ ಮಾರಾಟವಾಗುತ್ತಿದೆ.
ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ. ವಾಷಿಂಗ್ಟನ್ ಸೇಬು ಕೆಜಿಗೆ 355 ರೂಪಾಯಿ, ದಾಳಿಂಬೆ 285 ರೂಪಾಯಿ ಮತ್ತು ಯಾಲಕ್ಕಿ ಬಾಳೆಹಣ್ಣು 120 ರೂಪಾಯಿ ದರವಿದೆ.
ಬೆಲೆ ಏರಿಕೆಯಿಂದ ಗ್ರಾಹಕರು ಖರೀದಿ ಪ್ರಮಾಣವನ್ನು ಕಡಿಮೆ ಮಾಡುತ್ತಿದ್ದಾರೆ. ಹಿಂದೆ ಒಂದು ಅಥವಾ ಎರಡು ಕೆಜಿ ತರಕಾರಿ ಖರೀದಿಸುತ್ತಿದ್ದವರು ಈಗ ಅರ್ಧ ಕೆಜಿಗೆ ಸೀಮಿತವಾಗುತ್ತಿದ್ದಾರೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ದೀಪಾವಳಿ ಬಳಿಕ ಮಳೆಯಾದರೆ ತರಕಾರಿ ಪೂರೈಕೆ ಸುಧಾರಿಸಿ ಬೆಲೆ ಇಳಿಕೆಯಾಗಬಹುದು ಎಂಬ ನಿರೀಕ್ಷೆ ವ್ಯಾಪಾರಿಗಳದ್ದು. ಒಟ್ಟಿನಲ್ಲಿ ಹಬ್ಬದ ಸಂಭ್ರಮದ ನಡುವೆಯೇ ಬೆಲೆ ಏರಿಕೆ ಜನಸಾಮಾನ್ಯರ ಜೇಬಿಗೆ ಹೊರೆಯಾಗಿದೆ.