ತಮಿಳುನಾಡಿನ ಹೊಸೂರು ಸಮೀಪದ ಸಿಪ್ಕಾಟ್ ಪ್ರದೇಶದ ಖಾಸಗಿ ಕಾರ್ಖಾನೆಯಲ್ಲಿ ನಿರ್ಮಾಣ ಕಾಮಗಾರಿ ವೇಳೆ ಸೆಂಟ್ರಿಂಗ್ ಕುಸಿದು ಮೂವರು ಕಾರ್ಮಿಕರು ಸಾವು
ತಮಿಳುನಾಡಿನ ಹೊಸೂರು ಸಮೀಪದ ಸಿಪ್ಕಾಟ್ ಪ್ರದೇಶದಲ್ಲಿ ಖಾಸಗಿ ಕಾರ್ಖಾನೆಯ ನಿರ್ಮಾಣ ಕಾಮಗಾರಿ ವೇಳೆ ಸಂಭವಿಸಿದ ದುರಂತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರ್ಖಾನೆಯ ಕಟ್ಟಡ ನಿರ್ಮಾಣದ ವೇಳೆ ಕಾರ್ಮಿಕರು ಮೋಲ್ಡ್ಗೆ ಕಾಂಕ್ರೀಟ್ ಹಾಕುತ್ತಿದ್ದಾಗ ಸೆಂಟ್ರಿಂಗ್ಗೆ ಅಳವಡಿಸಿದ್ದ ಮರದ ರಚನೆ ಕುಸಿದಿದೆ ಎನ್ನಲಾಗಿದೆ. ಪರಿಣಾಮ, ಕಾರ್ಮಿಕರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ಈ ಘಟನೆಯಲ್ಲಿ ಕುಮರೇಶನ್ (39), ಮೈಕೆಲ್ (26) ಮತ್ತು ಶ್ರೀನಿವಾಸನ್ (26) ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡ ನಾಲ್ವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದಿನೇಶ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಭೇಟಿ ನೀಡಿದ್ದಾರೆ. ಕ್ರೇನ್ಗಳ ನೆರವಿನಿಂದ ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ನಿರ್ಮಾಣ ಕಾಮಗಾರಿ ವೇಳೆ ಸುರಕ್ಷತಾ ಕ್ರಮಗಳ ಪಾಲನೆಯಲ್ಲಿ ನಿರ್ಲಕ್ಷ್ಯ ನಡೆದಿದೆಯೇ ಎಂಬ ಬಗ್ಗೆ ತನಿಖೆಯಿಂದ ಸ್ಪಷ್ಟವಾಗಬೇಕಿದೆ.