ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ನಡೆದ ಹಾಸನಾಂಬೆ ದರ್ಶನೋತ್ಸವ ಸಂಪನ್ನಗೊಂಡಿದೆ.
ಲಕ್ಷಾಂತರ ಭಕ್ತರ ದರ್ಶನಕ್ಕೆ ಸಾಕ್ಷಿಯಾದ ಹಾಸನಾಂಬೆ ದರ್ಶನೋತ್ಸವ ಸಂಪನ್ನಗೊಂಡಿದೆ. ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ನಡೆದ ದರ್ಶನೋತ್ಸವದ ಬಳಿಕ ಬುಧವಾರ ಮಧ್ಯಾಹ್ನ 1.36ಕ್ಕೆ ದೇವಾಲಯದ ಗರ್ಭಗುಡಿ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು.
ಅರ್ಚಕರು ದೇವಿಗೆ ಹೂವಿನ ಅಲಂಕಾರ ಮಾಡಿ, ಕೊನೆಯ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗರ್ಭಗುಡಿಯ ಒಳಗೆ ದೀಪ ಹಚ್ಚಿಟ್ಟು ಬಾಗಿಲು ಮುಚ್ಚಲಾಯಿತು.
ಮಧ್ಯಾಹ್ನ 12ರಿಂದ 1.30ರವರೆಗೆ ರಾಹುಕಾಲ ಇದ್ದ ಹಿನ್ನೆಲೆಯಲ್ಲಿ ಈ ಬಾರಿ ಗರ್ಭಗುಡಿ ಬಾಗಿಲು ಮುಚ್ಚುವ ವಿಧಿವಿಧಾನವನ್ನು 1.36ಕ್ಕೆ ನೆರವೇರಿಸಲಾಯಿತು ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಗರ್ಭಗುಡಿ ಬಾಗಿಲು ಮುಚ್ಚುವ ವೇಳೆ ನೆರೆದಿದ್ದ ಭಕ್ತರು ಹಾಸನಾಂಬೆ ತಾಯಿಯ ಜಯಘೋಷ ಮೊಳಗಿಸಿ ಭಕ್ತಿಭಾವದಿಂದ ಬೀಳ್ಕೊಟ್ಟರು.