ಹಾಸನಾಂಬೆ ದರ್ಶನದ ಮೊದಲ ದಿನವೇ ಸಾವಿರಾರು ಭಕ್ತರು ಆಗಮಿಸಿದ್ದಾರೆ.

ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ತಾಯಿ ಹಾಸನಾಂಬೆಯ ದರ್ಶನಕ್ಕೆ ಮೊದಲ ದಿನವೇ ಭಕ್ತಸಾಗರ ಹರಿದುಬಂದಿದೆ.


ಮುಂಜಾನೆ 3 ಗಂಟೆಯಿಂದಲೇ ಸಾವಿರಾರು ಭಕ್ತರು ದೇವಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ₹300 ವಿಶೇಷ ದರ್ಶನದ ಸಾಲು ಸುಮಾರು ಎರಡು ಕಿಲೋಮೀಟರ್‌ವರೆಗೆ ವಿಸ್ತರಿಸಿದ್ದು, ₹1,000 ವಿಶೇಷ ದರ್ಶನದ ಸಾಲು ಕೂಡ ಸಂಪೂರ್ಣ ಭರ್ತಿಯಾಗಿದೆ ಎಂದು ವರದಿಯಾಗಿದೆ.


ಬೆಳಗ್ಗೆ 8ರಿಂದ 10 ಗಂಟೆಯವರೆಗೆ ಗೋಲ್ಡ್ ಪಾಸ್ ಹೊಂದಿರುವವರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10:30ರಿಂದ ಮಧ್ಯಾಹ್ನ 12:30ರವರೆಗೆ ಪ್ರೋಟೋಕಾಲ್ ಅಡಿಯಲ್ಲಿ ಬರುವ ಗಣ್ಯರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ.

ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಎಸ್‌ಪಿ ಶುಭನ್ವಿತಾ ಸ್ಥಳದಲ್ಲೇ ಮೊಕ್ಕಾಂ ಹೂಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಧರ್ಮದರ್ಶನ ಹಾಗೂ ₹300 ಮತ್ತು ₹1,000 ವಿಶೇಷ ದರ್ಶನದ ಸರತಿ ಸಾಲುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ದರ್ಶನದ ವೇಳೆ ಯಾವುದೇ ನೂಕುನುಗ್ಗಲು ಉಂಟಾಗದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.


ಅಕ್ಟೋಬರ್ 29ರಂದು ಸಂಪ್ರದಾಯಬದ್ಧವಾಗಿ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು. ಇದೀಗ ಮೊದಲ ದಿನದಿಂದಲೇ ಭಕ್ತರ ದಂಡು ಆಗಮಿಸುತ್ತಿದ್ದು, ದೇವಿಯ ದರ್ಶನಕ್ಕೆ ಹಾಸನದಲ್ಲಿ ಭಕ್ತಿಭಾವದ ಸಂಭ್ರಮ ಮನೆಮಾಡಿದೆ.