ಹಾಸನ ತಾಲೂಕಿನ ಕಳ್ಳಿಕೊಪ್ಪಲು ಗ್ರಾಮದ ಬಿಎಸ್‌ಎಫ್ ಯೋಧ ಕುಮಾರಸ್ವಾಮಿ (42) ಅವರು ಅನಾರೋಗ್ಯದಿಂದ ಚಂಡೀಗಢದಲ್ಲಿ ನಿಧನರಾಗಿದ್ದಾರೆ..

ಅನಾರೋಗ್ಯದಿಂದ ಹಾಸನ ಮೂಲದ ಬಿಎಸ್‌ಎಫ್ ಯೋಧರೊಬ್ಬರು ನಿಧನರಾಗಿದ್ದಾರೆ. ಹಾಸನ ತಾಲೂಕಿನ ಕಳ್ಳಿಕೊಪ್ಪಲು ಗ್ರಾಮದ ಕುಮಾರಸ್ವಾಮಿ (42) ಮೃತ ಯೋಧ.

ಕುಮಾರಸ್ವಾಮಿ ಅವರು ಸೇವಾವಧಿ ಪೂರ್ಣಗೊಂಡಿದ್ದರೂ ಹೆಚ್ಚುವರಿ ಅವಧಿಗೆ ದೇಶಸೇವೆ ಮುಂದುವರಿಸಿದ್ದರು. ಪಿತೃಪಕ್ಷದ ಸಂದರ್ಭದಲ್ಲಿ ಊರಿಗೆ ಬಂದಿದ್ದಾಗ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ಮತ್ತೆ ಕರ್ತವ್ಯಕ್ಕೆ ಮರಳಿದ್ದರು.

ಚಂಡೀಗಢದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮತ್ತೆ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 11ರಂದು ಸಂಜೆ 6 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.

ಇಂದು ನವೆಂಬರ್ 13ರಂದು ಬೆಳಗ್ಗೆ ಯೋಧನ ಪಾರ್ಥಿವ ಶರೀರವನ್ನು ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತರಲಾಯಿತು. ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಹಾಗೂ ಮಾಜಿ ಯೋಧರ ಸಂಘದ ಅಧ್ಯಕ್ಷ ನಾಗೇಶ್ ಅವರು ಗೌರವ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ದೇಶಸೇವೆಯಲ್ಲಿ ತೊಡಗಿದ್ದ ಯೋಧನ ನಿಧನಕ್ಕೆ ಗಣ್ಯರು ಮತ್ತು ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ.