ಚಿತ್ರದುರ್ಗದಿಂದ ದಾವಣಗೆರೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯೊಬ್ಬರು ಬಿಟ್ಟುಹೋದ ₹4 ಲಕ್ಷ ಮೌಲ್ಯದ ಚಿನ್ನಾಭರಣದ ಬ್ಯಾಗ್‌ನ್ನು ಚಾಲಕ ಮಂಜುನಾಥ್ ಸುರಕ್ಷಿತವಾಗಿ ಹಿಂದಿರುಗಿಸಿದ್ದಾರೆ.

ದಾವಣಗೆರೆ: ಬಸ್‌ನಲ್ಲಿ ಬಿಟ್ಟುಹೋಗಿದ್ದ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಮಹಿಳೆಯೊಬ್ಬರಿಗೆ ಹಿಂದಿರುಗಿಸುವ ಮೂಲಕ ಕೆಎಸ್‌ಆರ್‌ಟಿಸಿ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಚಿತ್ರದುರ್ಗದಿಂದ ದಾವಣಗೆರೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತಮ್ಮ ಬ್ಯಾಗ್‌ನ್ನು ಮರೆತು ಬಿಟ್ಟುಹೋಗಿದ್ದರು. ಬ್ಯಾಗ್‌ನಲ್ಲಿ ಚಿನ್ನಾಭರಣ ಇರುವುದನ್ನು ಗಮನಿಸಿದ ಚಾಲಕ ಮಂಜುನಾಥ್, ಅದನ್ನು ಡಿಪೋ ಮ್ಯಾನೇಜರ್ ಸಿದ್ದೇಶ್ ಸಿದ್ದನಮಠ ಅವರಿಗೆ ಹಸ್ತಾಂತರಿಸಿದ್ದಾರೆ.

ನಂತರ ಬ್ಯಾಗ್ ಪರಿಶೀಲಿಸಿದಾಗ ಒಂದು ಮಾಂಗಲ್ಯ ಸರ, ಎರಡು ಕಿವಿಯೋಲೆಗಳು ಹಾಗೂ ಮೊಬೈಲ್ ನಂಬರ್ ಪತ್ತೆಯಾಗಿದೆ. ಆ ನಂಬರ್‌ಗೆ ಕರೆ ಮಾಡಿದಾಗ, ಬ್ಯಾಗ್ ಚಿತ್ರದುರ್ಗ ಮೂಲದ ಹಾಗೂ ಚನ್ನಗಿರಿ ತಾಲೂಕಿನ ಚಿರಡೋಣಿಗೆ ತೆರಳುತ್ತಿದ್ದ ಲಕ್ಷ್ಮಿ ಎಂಬ ಮಹಿಳೆಗೆ ಸೇರಿದ್ದು ಎಂಬುದು ತಿಳಿದುಬಂದಿದೆ.

ಬಳಿಕ ಮಹಿಳೆಯನ್ನು ಕಚೇರಿಗೆ ಕರೆಸಿ, ಚಿನ್ನಾಭರಣವಿದ್ದ ಬ್ಯಾಗ್‌ನ್ನು ಅಧಿಕಾರಿಗಳು ಅವರಿಗೆ ಹಸ್ತಾಂತರಿಸಿದ್ದಾರೆ. ಚಾಲಕ ಮಂಜುನಾಥ್ ಅವರ ಪ್ರಾಮಾಣಿಕ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.