ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರ ಬೆನ್ನುನೋವು, ಚಿಕಿತ್ಸೆ ಮತ್ತು ಫಿಸಿಯೋಥೆರಪಿ ಕುರಿತು ಪರಪ್ಪನ ಅಗ್ರಹಾರ ಜೈಲಿನ ವೈದ್ಯಕೀಯ ವರದಿ ಇಂದು ನ್ಯಾಯಾಲಯಕ್ಕೆ ಸಲ್ಲಿಕೆಯಾಗಲಿದೆ.



ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರ ಬೆನ್ನುನೋವಿನ ಸಮಸ್ಯೆ ಹಾಗೂ ಜೈಲಿನಲ್ಲಿ ನೀಡಲಾಗುತ್ತಿರುವ ಚಿಕಿತ್ಸೆಗೆ ಸಂಬಂಧಿಸಿದ ವೈದ್ಯಕೀಯ ವರದಿ ಇಂದು (ನವೆಂಬರ್ 12) ನ್ಯಾಯಾಲಯಕ್ಕೆ ಸಲ್ಲಿಕೆಯಾಗಲಿದೆ.

ದರ್ಶನ್ ಅವರ ಆರೋಗ್ಯ ಸ್ಥಿತಿ, ಬೆನ್ನುನೋವಿನ ತೀವ್ರತೆ, ನೀಡಲಾಗುತ್ತಿರುವ ಚಿಕಿತ್ಸೆ ಮತ್ತು ಫಿಸಿಯೋಥೆರಪಿ ಕುರಿತು ವಿವರವಾದ ವರದಿ ಸಲ್ಲಿಸುವಂತೆ 59ನೇ ಸಿಸಿಹೆಚ್ ನ್ಯಾಯಾಲಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿತ್ತು.


ಪ್ರತಿನಿತ್ಯ ಫಿಸಿಯೋಥೆರಪಿ ನೀಡಲಾಗುತ್ತಿದೆಯೇ, ಜೈಲಿನಲ್ಲೇ ಅಗತ್ಯ ಚಿಕಿತ್ಸೆ ಲಭ್ಯವಿದೆಯೇ ಎಂಬ ಅಂಶಗಳು ವರದಿಯಲ್ಲಿ ಉಲ್ಲೇಖವಾಗುವ ನಿರೀಕ್ಷೆಯಿದೆ. ಜೈಲಿನಲ್ಲಿ ಅಗತ್ಯ ಚಿಕಿತ್ಸೆ ಸಾಧ್ಯವಾಗದಿದ್ದರೆ ಸರ್ಕಾರಿ ಆಸ್ಪತ್ರೆ ಅಥವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕಳುಹಿಸುವ ಬಗ್ಗೆಯೂ ನ್ಯಾಯಾಲಯ ಸೂಚನೆ ನೀಡಿತ್ತು.


ಇನ್ನು ಪ್ರಕರಣದ ಸಾಕ್ಷಿ ಪುನೀತ್ ಅವರ ಕ್ರಾಸ್ ಎಕ್ಸಾಮಿನೇಷನ್ ಪ್ರಕ್ರಿಯೆಯೂ ಇಂದಿನಿಂದ ಮತ್ತೆ ಮುಂದುವರಿಯಲಿದೆ. ಈ ಹಿಂದೆ ನೀಡಿದ್ದ ಹೇಳಿಕೆಗಳಿಗೆ ವಿರುದ್ಧವಾಗಿ ಸಾಕ್ಷಿ ನುಡಿದ ಹಿನ್ನೆಲೆಯಲ್ಲಿ ಪುನೀತ್ ಅವರನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸುವಂತೆ ಪ್ರಾಸಿಕ್ಯೂಷನ್ ಮನವಿ ಮಾಡಿತ್ತು.


ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಅವರು ಪುನೀತ್ ಅವರನ್ನು ಮತ್ತೆ ಪ್ರಶ್ನಿಸಲಿದ್ದು, ಸಿಆರ್‌ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ್ದ ಹೇಳಿಕೆಯನ್ನೂ ಆಧಾರವಾಗಿಟ್ಟುಕೊಂಡು ವಿಚಾರಣೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.

ವೈದ್ಯಕೀಯ ವರದಿಯ ಪರಿಶೀಲನೆ ಮತ್ತು ಸಾಕ್ಷಿಯ ವಿಚಾರಣೆ ಹಿನ್ನೆಲೆಯಲ್ಲಿ ಇಂದಿನ ನ್ಯಾಯಾಲಯದ ಪ್ರಕ್ರಿಯೆ ಪ್ರಕರಣದ ದೃಷ್ಟಿಯಿಂದ ಮಹತ್ವ ಪಡೆದಿದೆ.