ಹಾಸನಾಂಬೆ ಸಾರ್ವಜನಿಕ ದರ್ಶನದ ಎರಡನೇ ದಿನವೂ ಭಕ್ತರ ದಂಡು ಹರಿದು ಬಂದಿದೆ. 

ಹಾಸನದ ಅಧಿದೇವತೆ ಹಾಸನಾಂಬೆ ಸಾರ್ವಜನಿಕ ದರ್ಶನದ ಎರಡನೇ ದಿನವೂ ಭಕ್ತರ ದಂಡು ಹರಿದು ಬಂದಿದೆ. ಮಧ್ಯರಾತ್ರಿಯಿಂದಲೇ ಸಾವಿರಾರು ಭಕ್ತರು ದೇವಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ.


ಬೆಳಗ್ಗೆ 6 ಗಂಟೆಯಿಂದ ದೇವಿಯ ದರ್ಶನ ಆರಂಭವಾಗಿದ್ದು, 300 ರೂಪಾಯಿ ವಿಶೇಷ ದರ್ಶನದ ಸಾಲಿನಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಮತ್ತೊಂದೆಡೆ, 1,000 ರೂಪಾಯಿ ವಿಶೇಷ ದರ್ಶನದ ಸಾಲಿನಲ್ಲಿ ಬೆಳಗಿನ ವೇಳೆಗೆ ಹೆಚ್ಚು ಜನಸಂದಣಿ ಕಂಡುಬಂದಿಲ್ಲ ಎಂದು ವರದಿಯಾಗಿದೆ.


ದೇವಾಲಯದ ಆವರಣದಲ್ಲಿ ಜನದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರು ಬೆಳಗ್ಗೆಯೇ ದೇವಸ್ಥಾನಕ್ಕೆ ಭೇಟಿ ನೀಡಿ, ಗರ್ಭಗುಡಿ ಸಮೀಪ ನಿಂತು ಭಕ್ತರ ಸಂಚಾರದ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ.


ಹಾಸನಾಂಬೆ ಜಾತ್ರೆಯ ಮೊದಲ ದಿನವೂ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮೊದಲ ದಿನದ ಜನಸಂದಣಿ ಕುರಿತು ಪ್ರತಿಕ್ರಿಯಿಸಿದ್ದ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು, ಇದನ್ನು ದೇವಿಯ ಪವಾಡ ಎಂದು ಬಣ್ಣಿಸಿದ್ದರು.

ಒಟ್ಟಿನಲ್ಲಿ ಜಾತ್ರೆಯ ಎರಡನೇ ದಿನವೂ ಹಾಸನಾಂಬೆ ದರ್ಶನಕ್ಕೆ ಭಕ್ತರ ಉತ್ಸಾಹ ಮುಂದುವರಿದಿದೆ.