Bengaluru : ಯಲಹಂಕದ ಜ್ಯುಡಿಷಿಯಲ್ ಲೇಔಟ್‌ನಲ್ಲಿ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದ ಯುವತಿಗೆ ಸವಾರ ಅಸಭ್ಯ ಪ್ರಶ್ನೆ ಕೇಳಿದ್ದಾನೆಂಬ ಆರೋಪ ಕೇಳಿಬಂದಿದೆ.

Bengaluru : ಬೈಕ್ ಟ್ಯಾಕ್ಸಿ ಸವಾರನೊಬ್ಬ ಯುವತಿಗೆ ಅಸಭ್ಯ ಪ್ರಶ್ನೆ ಕೇಳಿ ಕಿರುಕುಳ ನೀಡಿದ್ದಾನೆ ಎಂಬ ಆರೋಪ ನಗರದಲ್ಲಿ ಕೇಳಿಬಂದಿದೆ. ಈ ಕುರಿತು ಸಂತ್ರಸ್ತ ಯುವತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಘಟನೆ ಬಗ್ಗೆ ವಿವರಿಸಿದ್ದಾರೆ.

ಯಲಹಂಕದ ಜ್ಯುಡಿಷಿಯಲ್ ಲೇಔಟ್‌ನಿಂದ ಯುವತಿ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು ಎನ್ನಲಾಗಿದೆ. ಸವಾರ ಸ್ಥಳಕ್ಕೆ ಬಂದಿದ್ದರೂ ಯುವತಿಗೆ ಕರೆ ಅಥವಾ ಸಂದೇಶ ಮಾಡದೆ ಅಲ್ಲಿಂದ ತೆರಳಿದ್ದಾನೆ ಎಂದು ಆರೋಪಿಸಲಾಗಿದೆ.

ನಂತರ ಯುವತಿ ಸವಾರನಿಗೆ ಕರೆ ಮಾಡಿದಾಗ, ಆತ ಅಸಭ್ಯವಾಗಿ ಮಾತನಾಡಿ ಲೈಂಗಿಕ ಸೇವೆ ಲಭ್ಯವಿದೆಯೇ ಎಂದು ಕೇಳಿದ್ದಾನೆ ಎಂದು ಯುವತಿ ದೂರಿದ್ದಾರೆ.

ಈ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಯುವತಿ, ಮಹಿಳೆಯರ ಸುರಕ್ಷತೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ. ಇಂತಹ ವರ್ತನೆಯಿಂದ ಇತರ ಬೈಕ್ ಟ್ಯಾಕ್ಸಿ ಸವಾರರಿಗೂ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದ್ದಾರೆ.

ಈ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ದೂರು ದಾಖಲಾಗಿದೆಯೇ, ಸಂಬಂಧಪಟ್ಟ ಬೈಕ್ ಟ್ಯಾಕ್ಸಿ ಸಂಸ್ಥೆ ಯಾವ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.