ಬೆಂಗಳೂರಿನ ಶ್ರೀರಾಮಪುರದಲ್ಲಿ ಕೆಮಿಕಲ್ ತುಂಬಿದ್ದ ಬಕೆಟ್‌ಗೆ ಬಿದ್ದ 9 ವರ್ಷದ ಸುಬ್ರಮಣಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. 

ಬೆಂಗಳೂರು: ಕೆಮಿಕಲ್ ತುಂಬಿದ್ದ ಬಕೆಟ್‌ಗೆ ಬಿದ್ದು 9 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ನಗರದ ಶ್ರೀರಾಮಪುರದಲ್ಲಿ ನಡೆದಿದೆ. ಸುಬ್ರಮಣಿ ಮೃತಪಟ್ಟ ಬಾಲಕ.

ನವೆಂಬರ್ 2ರಂದು ಈ ಘಟನೆ ನಡೆದಿದ್ದು, ಬಾಲಕ ವಾಸವಿದ್ದ ಮನೆಯ ಪಕ್ಕದಲ್ಲೇ ಕೆಮಿಕಲ್ ಫ್ಯಾಕ್ಟರಿ ಇತ್ತು ಎನ್ನಲಾಗಿದೆ. ಆಟವಾಡುತ್ತಿದ್ದ ಬಾಲಕ ಫ್ಯಾಕ್ಟರಿ ಆವರಣಕ್ಕೆ ತೆರಳಿದ್ದ ವೇಳೆ ಕೆಮಿಕಲ್ ತುಂಬಿದ್ದ ಬಕೆಟ್‌ಗೆ ಬಿದ್ದಿದ್ದಾನೆ ಎಂದು ವರದಿಯಾಗಿದೆ.

ಕೂಡಲೇ ಅಲ್ಲಿದ್ದವರು ಬಾಲಕನನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬಾಲಕ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದ ದೃಶ್ಯಗಳು ಫ್ಯಾಕ್ಟರಿಯ ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ವರದಿಯಾಗಿದೆ.