ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಸಿಲುಕಿ ಮಹಿಳೆ ಮೃತಪಟ್ಟ ಘಟನೆ ಬೆನ್ನಲ್ಲೇ ಬೆಳಗಾವಿ ಎಸ್‌ಪಿ ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ. 

ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆನ್ನಲ್ಲೇ ಬೆಳಗಾವಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ನಿಷೇಧಿತ ಮಾಂಜಾ ದಾರ ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬೆಳಗಾವಿ ಎಸ್‌ಪಿ ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ.


ಗಾಳಿಪಟ ಹಾರಿಸಲು ಬಳಸುವ ಅಪಾಯಕಾರಿ ಮಾಂಜಾ ದಾರದಿಂದ ಬೈಕ್ ಸವಾರರು, ಸೈಕಲ್ ಸವಾರರು ಹಾಗೂ ಪಾದಚಾರಿಗಳಿಗೆ ಅಪಾಯ ಉಂಟಾಗುವ ಸಾಧ್ಯತೆಯಿದೆ. ದಾರ ಕುತ್ತಿಗೆಗೆ ಸಿಲುಕಿದರೆ ಗಂಭೀರ ಗಾಯಗಳಾಗುವ ಜೊತೆಗೆ ಪ್ರಾಣಾಪಾಯವೂ ಸಂಭವಿಸಬಹುದು.


ಹೀಗಾಗಿ ಮಾಂಜಾ ದಾರವನ್ನು ಖರೀದಿಸದಂತೆ ಮತ್ತು ಬಳಸದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ನಿಷೇಧಿತ ದಾರದ ಮಾರಾಟ ಕಂಡುಬಂದರೆ ವ್ಯಾಪಾರಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಗಾಳಿಪಟ ಹಾರಿಸುವವರು ಸುರಕ್ಷಿತವಾದ, ಕಾನೂನುಬದ್ಧ ಸಾಮಾನ್ಯ ದಾರವನ್ನೇ ಬಳಸಬೇಕು. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ನಿಷೇಧಿತ ಮಾಂಜಾ ದಾರದ ಬಳಕೆಗೆ ಕಡಿವಾಣ ಹಾಕುವಂತೆ ಪೊಲೀಸರು ಮನವಿ ಮಾಡಿದ್ದಾರೆ.